ಕ್ರಾಂತ	
	
ಹೆಜ್ಜೆ ಇಡು, ಆಕ್ರಮಿಸು, ವ್ಯಾಪ್ತವಾಗು, ದಾಟು, ಸಂಬಂಧಿಸು ಎಂಬ ಅರ್ಥಗಳಲ್ಲಿ ಕ್ರಾಂತಶಬ್ದ ಪ್ರಯೋಗದಲ್ಲಿದೆ. 
ಕ್ರಮುಪಾದವಿಕ್ಷೇಪೇ ಎಂಬ ಧಾತುವಿನಿಂದಿದು ನಿಷ್ಪನ್ನವಾಗಿದೆ.

ಮನಸೀಂದುಂ ದಿಶಃ ಶ್ರೋತ್ರೇ ಕ್ರಾಂತೇ ವಿಷ್ಣುಂ ಬಲೇ ಹರಂ|
ವಾಚ್ಯಗ್ನಿಂ ಮಿತ್ರಮುತ್ಸರ್ಗೇ ಪ್ರಜನೇ ಚ ಪ್ರಜಾಪತಿಂ||
ಎಂದು ಮನುಸ್ಮøತಿಯಲ್ಲಿ ತಿಳಿಸಿರುವಂತೆ ಪಾದೇಂದ್ರಿಯಕ್ಕೆ (ಕ್ರಾಂತಕ್ಕೆ) ವಿಷ್ಣು ಪ್ರಧಾನನಾದವ.

ತೈತ್ತಿರೀಯಾರಣ್ಯಕದಲ್ಲಿ ಅಶ್ವಕ್ರಾಂತೇ ರಥಕ್ರಾಂತೇ ವಿಷ್ಣುಕ್ರಾಂತೇ ವಸುಂಧರಾ| ಶಿರಸಾ ಧಾರಿತಾ ದೇವಿ ರಕ್ಷಸ್ವ ಮಾಂ ಪದೇಪದೇ|| - ಎಂಬಲ್ಲಿ ಕ್ರಾಂತ ಶಬ್ದದ ಉಲ್ಲೇಖವಿದೆ. ಇದು ಸ್ನಾನಕಾಲದಲ್ಲಿ ಮೃತ್ತನ್ನು (ಮಣ್ಣನ್ನು) ತೆಗೆದುಕೊಂಡು ಧರಿಸುವಾಗ ಹೇಳುವ ಮಂತ್ರ. ಅಶ್ವ, ರಥ, ವಿಷ್ಣು- ಈ ಮೂರರಿಂದಾದ ಕ್ರಮವನ್ನು ಸಹಿಸಿ ಸಹನಶೀಲೆಯಾಗಿರುವ ವಸುಂಧರೆಯೇ ನನ್ನಿಂದ ತಲೆಯಲ್ಲಿ ಧರಿಸಲ್ಪಟ್ಟ ನೀನು ನನ್ನನ್ನು ಕಾಪಾಡು ಎಂದು ಈ ಮಂತ್ರದ ಅರ್ಥ.

ಅಶ್ವಕ್ರಾಂತ ಮೂರು ಬಗೆ: ಅಗ್ನಿಚಯನದಲ್ಲಿ ಉಖಾ (ಅಗ್ನಿಕುಂಡ) ನಿರ್ಮಾಣಕ್ಕಾಗಿ ಭೂಮಿಯನ್ನು ಅಗೆಯುವ ಜಾಗದಲ್ಲಿ, ಅಗೆಯುವುದಕ್ಕೆ ಮುಂಚೆ ಅಶ್ವವನ್ನು ಕ್ರಮಿಸುವುದು; ವ್ಯಾಪಕನಾದ ಪುರುಷೋತ್ತಮನಿಂದ ಕ್ರಾಂತವಾದದ್ದು (ವ್ಯಾಪ್ತವಾದದ್ದು); ಗಮನಶೀಲ ಹಯಗ್ರೀವನಿಂದ ಕ್ರಾಂತವಾದದ್ದು-ಹೀಗೆ.

ರಥಕ್ರಾಂತ ಎರಡು ಬಗೆಯದು: ಯಜ್ಞಭೂಮಿಯ ಶುದ್ಧ್ಯರ್ಥವಾಗಿ ಆ ಜಾಗದಲ್ಲಿ ರಥವನ್ನು ಕ್ರಮಿಸುವುದು; ಅರ್ಜುನಸಾರಥಿಯಾದ ಕೃಷ್ಣನಿಂದ ಅಧಿಷ್ಠಿತವಾದುದು. 

ತ್ರಿವಿಕ್ರಮಾವತಾರದಲ್ಲಿ ವಾಮನರೂಪಧಾರಿ ವಿಷ್ಣುವಿನಿಂದ ಕ್ರಾಂತವಾದ ಭೂಮಿ ವಿಷ್ಣುಕ್ರಾಂತ.

ಇದು ಭಾಷ್ಯಕಾರರ ಅಭಿಪ್ರಾಯ.

ಜ್ಯೋತಿಶ್ಯಾಸ್ತ್ರದಂತೆ ಸೂರ್ಯ ಕುಜ ಶನಿ ರಾಹು ಕೇತು ಈ ಪಾಪ ಗ್ರಹಗಳಿರುವ ನಕ್ಷತ್ರ ನಿತ್ಯನಕ್ಷತ್ರವಾದಾಗ, ಪಾಪಗ್ರಹಕ್ರಾಂತವಾದ ಆ ನಕ್ಷತ್ರ ಶುಭಕಾರ್ಯಗಳಿಗೆ ಪ್ರಶಸ್ತವಲ್ಲ.       	 			(ಎಸ್.ಎನ್.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ